ಇಂದಿನ ಹೈಟೆಕ್ ಪ್ರಪಂಚದಲ್ಲಿ ಮಕ್ಕಳು ಹೆಚ್ಚು ವಿಷಯಗಳು ಕಲಿಯುವ ಒತ್ತಡದಲ್ಲಿ ಬೆಳೆಯುತ್ತಿದ್ದಾರೆ . ಆದರೆ ಅವರು ಸ್ವತಂತ್ರ ರಾಗಿ ಬದುಕಲು ಬೇಕಾದ ಜೀವನ ಶೈಲಿ ಕಲಿಯುತ್ತಿದ್ದಾರೆಯೇ? ಮೊಬೈಲ್ ಫೋನ್ ಅನ್ನು ಬಳಸುವಷ್ಟು ಸುಲಭವಾಗಿ ಅವರು ತಿಂದ ತಟ್ಟೆಯನ್ನು ತೊಳೆಯಬಲ್ಲರೆ? ಟಿವಿ ರಿಮೋಟ್ ಒತ್ತುವಷ್ಟು ಸುಲಭವಾಗಿ ತರಕಾರಿ ಬಿಡಿಸಬಲ್ಲರೇ? ಈ ಪ್ರಶ್ನೆ ಗಳು ನಿಮಗೆ ಅಸಮಂಜಸ ವೆನಿಸಬಹುದು ಆದರೆ ಒಂದು ಸಂಶೋಧನೆಯ ಪ್ರಕಾರ ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಸುಖಮಯವಾದ ಜೀವನ ನೀಡುವ ಆಸೆ ಯೊಂದಿಗೆ ಅವರನ್ನು ಅವಶ್ಯವಾದ ಜೀವನ ಕೌಶಲ ಗಳಿಂದ ದೂರ ಮಾಡುತ್ತಿದ್ದಾರೆ.

ನೀವು ನಿಮ್ಮ ಮಕ್ಕಳು ಸ್ವತಂತ್ರ ರಾಗಿ, ಆನಂದಮಯ ವಾದ, ಒತ್ತಡ ರಹಿತ ಜೀವನ ನಡೆಸಬೇಕು ಎಂದರೆ ಅವರು 10 ದಾಟುವುದರಲ್ಲಿ ಈ ಕೆಳಗಿನ ಕೆಲಸಗಳನ್ನು ತಪ್ಪದೆ ಕಲಿಸಿ . ಈ ಎಲ್ಲ ಕೆಲಸಗಳನ್ನು ಒಂದೇ ಸರಿ ಕಲಿಸಬೇಕೆಂದಿಲ್ಲ ಆದರೆ ಸಣ್ಣ ವಯಸ್ಸಿನಿಂದಲೇ ನಿಮ್ಮ ಮೇಲ್ವಿಚಾರಣೆಯಲ್ಲಿ ಇವುಗಳನ್ನು ಕಲಿಸಲು ಪ್ರಯತ್ನಿಸಿ

  1. ಸ್ವಚ್ಛತೆ: ಅವರಿಗೆ ಸಂಭಂದಿಸಿದಂತೆ ಅವರೇ ಹಲ್ಲುಜ್ಜಿ, ಸ್ನಾನ ಮಾಡಿ ಶಾಲೆಗೆ ತಯಾರಾಗುವುದು ಅವರು ಕಲಿಯಬೇಕು . ಅವರು ಊಟ ಮಾಡುವ ತಟ್ಟೆ – ಲೋಟ , ಬಳಸಿದ ಕರ ವಸ್ತ್ರ ಶುಚಿ ಮಾಡುವುದು . ಸಾಧ್ಯವಾದಲ್ಲಿ ವಾರದಲ್ಲಿ ಒಮ್ಮೆ ಮನೆಯ ಇತರೆ ಸದಸ್ಯರು ಬಳಸಿದ ಪಾತ್ರೆಗಳನ್ನು ಶುಚಿ ಮಾಡುವುದು . ಅವರ ಶಾಲೆಯ ಪುಸ್ತಕ ಗಳು ಅವರು ಓದಲು ಬಳಸುವ ಜಾಗ ಶುಚಿ ಯಾಗಿಡುವುದು ಮಕ್ಕಳು ಎಷ್ಟು ಬೇಗ ಕಲಿತರೆ ಅಷ್ಟು ಉತ್ತಮ ಇದನ್ನು ಕಲಿಸಲು ಪೋಷಕರು ಸಂಯಮ ದಿಂದ ಅವರಿಗೆ ಮಾರ್ಗದರ್ಶನವನ್ನು ನೀಡಬೇಕು .
  2. ವೇಳಾಪಟ್ಟಿ ಯನ್ನು ತಯಾರಿಸುವುದು: ಅವರ ಶಾಲಾ ಸಮಯವಲ್ಲದೆ ಇತರೆ ಕಲಿಕೆಗೆ, ಆಟ ಪಾಠಗಳಿಗೆ ಸಮಯವನ್ನು ಹೊಂದಿಸಿಕೊಳ್ಳಲು ಅವರು ಚಿಕ್ಕಂದಿನಿಂದ ಕಲಿತರೆ ಮಾತ್ರ ಅವರು ಸಮಯವನ್ನು ಸದ್ಬಳಕೆ ಮಾಡಲು ಹಾಗು ಆನಂದಮಯವಾಗಿ ಒತ್ತಡ ರಹಿತ ಜೀವನವನ್ನು ವ್ಯಯಿಸಲು ಸಾಧ್ಯವಾಗುತ್ತದೆ .
  3.  ಮೊಳೆ ಹೊಡೆಯುವುದು/ತರಕಾರಿ ಹಚ್ಚುವುದು: ಸಣ್ಣ ಮಕ್ಕಳಿಗೆ ಇದನ್ನು ಕಲಿಸುವಾಗ ಮುಂಜಾಗ್ರತೆ ವಹಿಸಬೇಕು , ಮೊದಲು ಅವರಿಗೆ ಈ ಕೆಲಸ ಮಾಡುವ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಅರ್ಥ ವಾಗುವಂತೆ ವಿವರಿಸಬೇಕು, ಆಗಬಹುದಾದ ಅನಾಹುತಗಳ ಬಗ್ಗೆ ಅವರಿಗೆ ತಿಳಿದಿದ್ದರೆ ಅವರು ಎಚ್ಚರಿಕೆಯಿಂದ ಕಲಿಯುತ್ತಾರೆ .
  4. ಪತ್ರ ಬರೆಯುವುದು: ಇಂದಿನ ಹೈಟೆಕ್ ಯುಗದಲ್ಲಿ ಪತ್ರ ಲೇಖನ ಜೀವಂತವಾಗಿಲ್ಲ ಆದರೂ ನಮ್ಮ ನಿತ್ಯ ಜೀವನದಲ್ಲಿ ಹಲವಾರು ಕಡೆ ನಮಗೆ ಇದರ ಅವಶ್ಯಕತೆ ಇರುತ್ತದೆ. ನಮ್ಮ ಆತ್ಮೀಯರಿಗೆ ವಿಶೇಷ ಸಂದರ್ಭಗಳಲ್ಲಿ ಅಭಿನಂದನೆಗಳನ್ನು ತಿಳಿಸಲು , ಕಚೇರಿಗಳಲ್ಲಿ ಅಧಿಕಾರಿಗಳಿಗೆ ನಮ್ಮ ಸಮಸ್ಯೆಗಳನ್ನು ತಿಳಿಸಲು – ಹೀಗೆ ಇವುಗಳನ್ನು ಸಣ್ಣ ವಯಸ್ಸಿನಲ್ಲೇ ಕಲಿತರೆ ಭವಿಷ್ಯದಲ್ಲಿ ಅವರಿಗೆ ಇದರ ಅವಶ್ಯಕತೆ ಇದ್ದಾಗ ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯ ವಾಗುತ್ತದೆ .
  5.  ಗಾಯಕ್ಕೆ ಚಿಕಿತ್ಸೆ: ಮಕ್ಕಳು ಸಣ್ಣ ವರಿದ್ದಾಗಲೇ ರಕ್ತವನ್ನು ನೋಡಿ ಭಯಪಡದೇ ಗಾಯವಾದಾಗ ಅವರು ಅದಕ್ಕೆ ಹೇಗೆ ಚಿಕಿತ್ಸೆ ಮಾಡಬೇಕು ಎಂಬುವುದನ್ನು ಕಲಿ ಸಿದರೆ ಅವರಿಗೆ ಅಲ್ಲದೆ ಅವರ ಸುತ್ತಮುತ್ತಲಿನ ಜನರಿಗೂ ಉಪಯೋಗವಾಗುತ್ತದೆ . ಸಾಧ್ಯವಾದರೆ ಬೆಂಕಿ ಅವಘಢಗಳು, ಇನ್ನಿತರೇ ಅನಾಹುತಗಳು ಸಂಭವಿಸಿದಾಗ ಅವರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಕ್ಕಳಿಗೆ ವಿವರಿಸುವುದು ಅವಶ್ಯಕ .
  6. ಸಣ್ಣ ಪುಟ್ಟ ಲೆಕ್ಕಾಚಾರ: ನೀವು ದಿನಸಿ ಸಾಮಾನು ಖರೀದಿಸುವಾಗ ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ತಂದ ಹಣ ವೆಷ್ಟು , ಎಷ್ಟು ಖರ್ಚಾಯಿತು, ಮಿಕ್ಕಿದ್ದೆಷ್ಟು ಹೀಗೆ ಅವರಿಗೆ ಹೇಳಿಕೊಡುವುದರಿಂದ ಚಿಕ್ಕವರಿದ್ದಾಗಲೇ ಹಣಕಾಸು ವಿಷಯ ದ ಬಗ್ಗೆ ಅವಗಾಹನೆ ಬೆಳೆಯುತ್ತದೆ .
  7.  ಗಿಡ ನೆಡುವುದು: ಬಹಳಷ್ಟು ಮಕ್ಕಳು ಒಔಪಚಾರಿಕ ವಾಗಿ ಇದನ್ನು ಶಾಲೆಯಲ್ಲೇ ಕಲಿಯುತ್ತಾರೆ , ಆದರೆ ದಿನ ನಿತ್ಯ ಅಗತ್ಯ ವಾದ ಕೆಲವು ತರಕಾರಿಗಳನ್ನು ನಿಮ್ಮ ಮನೆಯ ಮುಂಬಾಗದಲ್ಲೋ, ಹಿತ್ತಲಿನಲ್ಲೋ ಅಥವಾ ಸಣ್ಣ ಹೂ ಕುಂಡಿಗಳಲ್ಲೊ ಬೆಳೆಸುವುದನ್ನು ಮಕ್ಕಳಿಗೆ ಕಲಿಸಬೇಕು . ಇದರಿಂದ ಅವರಿಗೆ ನಮ್ಮ ಆಹಾರ ವಸ್ತುಗಳು/ಪದ್ದತಿಯ ಬಗ್ಗೆ ಆಸಕ್ತಿ ಬೆಳೆಯುತ್ತದೆ – ಇದು ನಮ್ಮ ಮುಂದಿನ ಪೀಳಿಗೆಗೆ ಬಹಳಷ್ಟು ಮುಖ್ಯ .
  8. ಅತಿಥಿಗಳನ್ನು ಸತ್ಕರಿಸುವುದು: ಮನೆಗೆ ತಿಳಿದ ನೆಂಟರೋ , ಸ್ನೇಹಿತರೋ, ಅತಿಥಿಗಳೋ ಬಂದಾಗ ಅವರೊಂದಿಗೆ ಹೇಗೆ ವರ್ತಿಸಬೇಕು ಉದಾಹರಣೆಗೆ ನಮಸ್ತೆ ಹೇಳುವುದು , ಅವರಿಗೆ ಕೂರಲು ಅನುಕೂಲವಾಗುವಂತೆ ಚೇರ್ ಹಾಕುವುದು – ಹೀಗೆ ಅವರು ಕಲಿತಿದ್ದರೆ ಮುಂದೆ ಸಂಸ್ಕಾರ ವಂತರಾಗುತ್ತಾರೆ .
  9.  ನೈಸರ್ಗಿಕ ಸಂಪನ್ಮೂಲಗಳು ಮತ್ತು ಇಲೆಕ್ಟ್ರಾನಿಕ್ ವಸ್ತುಗಳ ಮಿತವಾದ ಬಳಕೆ: ಜಾಗತೀಕ ತಾಪಮಾನ ಏರುತ್ತಿರುವ ಈ ಸಮಯದಲ್ಲಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಹಾಗು ಪ್ರಾಕೃತಿಕ ಸಂಪನ್ಮೂಲಗಳನ್ನು ಕಾಪಾಡುವುದರ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸಲು ಸಣ್ಣ ವಯಸ್ಸಿನಿಂದಲೇ ಕಲಿಯಬೇಕು . ಮನೆಯಲ್ಲಿ ಅಗತ್ಯ ವಿಲ್ಲದೆ ಇದ್ದಾಗ ಲೈಟ್ , ಪ್ಯಾನ್ ಗಳ ಸ್ವಿಚ್ ಆರಿಸುವುದು , ಮೊಬೈಲ್ , ಕಂಪ್ಯೂಟರ್, ಲ್ಯಾಪ್ ಟಾಪ್ ಅನ್ನು ಮಿತವಾಗಿ ಅವಶವಿದ್ದಾಗ ಬಳಸುವುದರ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಬೇಕು .

ನನ್ನ ಅನಿಸಿಕೆಯಲ್ಲಿ ಇವು ಅವಶ್ಯವಾದ ಮುಖ್ಯವಾದ ಕಲಿಯಲೇಬೇಕಾದ ವಿಷಯಗಳು. ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ