ನಾವು ಎಷ್ಟೇ ಆಧುನಿಕ ಜೀವನ ಶೈಲಿ ಕಡೆ ಬೆಳೆದರೂ ಇಂದಿಗೂ ಕೆಲವು ವಿಷಯ ಗಳ ಬಗ್ಗೆ ಪೋಷಕರು ಮಕ್ಕಳೊಂದಿಗೆ ಸರಿಯಾದ ಸಮಯದಲ್ಲಿ ..ಸರಿಯಾದ ರೀತಿಯಲ್ಲಿ ಮಾತಾಡಿ -ಚರ್ಚಿಸದೆ ಮಕ್ಕಳು ಬಹಳಷ್ಟು ಸಮಯ ಅವರದೇ ಕಲ್ಪಿತ ಜ್ಞಾನ ದಿಂದ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ವಿಷಯವೂ ಮಕ್ಕಳಿಗೆ ನಾವು ಏತಕ್ಕೆ ತಿಳಿಸಬೇಕು? ಶಾಲೆಯಲ್ಲಿ ಕಲಿಸುತ್ತಾರೆ ಎಂಬುದು ಅನೇಕ ಪೋಷಕರ ಅಭಿಪ್ರಾಯ. ಹೌದು ನಿಜ ಶಾಲೆಯಲ್ಲಿ ಕಲಿಯುತ್ತಾರೆ ಆದರೆ ಅವುಗಳ ಬಗ್ಗೆ ಪೋಷಕರು ಚರ್ಚಿಸುವುದು ಅಷ್ಟೇ ಅಗತ್ಯ . ಹಾಗೆ ಚರ್ಚಿಸುವುದರಿಂದ ಮಕ್ಕಳಲ್ಲಿ ಮೌಢ್ಯತೆ ದೂರವಾಗಿ ಆರೋಗ್ಯಕರವಾದ ಸಂಬಂಧಗಳು ಬೆಳೆಯಲು ಸಹಾಯವಾಗುತ್ತದೆ.

ನನ್ನ ಈ ಮಾತಿಗೆ ಎಷ್ಟು ಜನ ಪೋಷಕರ ಸಹಮತ ವಿದೆ ಎಂಬುದು ನನಗೆ ತಿಳಿಯದು ಆದರೆ, ಹೆಣ್ಣು ನ್ನು ದೇವರ ಸಮಾನ ನೋಡುವ ನಮ್ಮ ಸಂಪ್ರದಾಯದಲ್ಲಿ ಹೆಣ್ಣಿನ ದೇಹ ದಲ್ಲಿ ನಡೆಯುವ ಮುಖ್ಯ ಬದಲಾವಣೆಗಳ ಬಗ್ಗೆ ನಾವು ಇಂದಿನ ಮಕ್ಕಳಿಗೆ ಯಾವ ಸಮಯದಲ್ಲಿ , ಯಾವ ರೀತಿ ತಿಳಿಸಿದರೆ ಉತ್ತಮ ಎಂಬುದರ ಬಗ್ಗೆ ನನ್ನ ಅನಿಸಿಕೆಯನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ

 1. ಯಾವ ವಯಸ್ಸು ಸೂಕ್ತ ? : ಮೊಬೈಲ್ – ಇಂಟರ್ನೆಟ್ ನಮ್ಮ ಅಂಗೈ ಸೇರಿದಾಗಲೇ ನಮ್ಮ ಮಕ್ಕಳ ಮೆದುಳಿಗೆ ಸೇರುವ ಯಾವ ಮಾಹಿತಿಯ ಮೇಲೂ ನಮ್ಮ ಹಿಡಿತ ಇಲ್ಲ ವೆಂಬುವುದನ್ನು ನಾವೆಲ್ಲ ಒಪ್ಪಲೇ ಬೇಕು. ಜಂಕ್ ಫುಡ್ ಸೇವನೆಯಿಂದ ಸಮಯಕ್ಕೂ ಮುಂಚೆಯೇ ಇಂದಿನ ಮಕ್ಕಳು ಋತುಚಕ್ರ ಬದಲಾವಣೆಗೆ ಗುರಿಯಾಗುತ್ತಿದ್ದಾರೆ – ಆದ್ದರಿಂದ ಮಕ್ಕಳ ಆಸಕ್ತಿ, ತಿಳಿಯುವ ಅರ್ಥಮಾ ಡಿಕೊಳ್ಳುವ ಕ್ಷಮತೆ ಯನ್ನು ಗಮನಿಸಿ 9 ವರ್ಷ ದಾಟಿದ ಮೇಲೆ ಅವರಲ್ಲಿ ಹಂತ ಹಂತ ವಾಗಿ ದೇಹ ದ ಬದಲಾವಣೆಗಳ ಬಗ್ಗೆ ಮಾತಾಡುವುದು ಸೂಕ್ತ.
 2. ಯಾರ ಮುಂದೆ ಚರ್ಚಿಸಬೇಕು : ನಾವು ಮಕ್ಕಳಿಗೆ ದೇಹ ದ ಬದಲಾವಣೆಯ ವಿವಿಧ ಹಂತಗಳನ್ನು ಮಾತ್ರ ತಿಳಿಸಲು ಪ್ರಯತ್ನಿಸುತ್ತಿರುವುದರಿಂದ ಅವರ ಆತ್ಮೀಯ ಗೆಳೆಯರ ಪೋಷಕರೊಡನೆ ಚರ್ಚಿಸಿ ಅವರ ಒಪ್ಪಿಗೆ ಪಡೆದು ಅವರನ್ನೂ ಬೇಕಾದಲ್ಲಿ ಈ ಚರ್ಚೆಯ ಭಾಗವಾಗಿಸಬಹುದು. ನಿಮ್ಮ ಮನೆಯಲ್ಲಿ ಹೆಣ್ಣು ಗಂಡು ಎರಡು ಮಕ್ಕಳಿದ್ದಾರೆ ಎಂದಾದರೆ ಮೊದಲು ಅವರನ್ನು ಬೇರೆ ಬೇರೆ ಯಾಗಿ ಮಾತಾಡಿ ನಂತರ ಇಬ್ಬರನ್ನು ಒಮ್ಮೆ ಜೊತೆಯಲ್ಲಿ ಕೂರಿಸಿ ಚರ್ಚಿಸಬಹುದು . ನಿಮ್ಮ ಈ ಕೆಲಸಕ್ಕೆ ಸಹಕರಿಸುವ ಕುಟುಂಬದ ಇತರೆ ಸದಸ್ಯರು ಇದರ ಭಾಗವಾಗಬಹುದು – ಆದರೆ ಮಕ್ಕಳು ವಯಸ್ಸಿನ ಅವಶ್ಯಕತೆಗಿಂತ ಹೆಚ್ಚು ಮಾಹಿತಿ ಅಥವಾ ಪ್ರಶ್ನೆಗಳು ಕೇಳಿದಾಗ ನಿಭಾಯಿಸುವಷ್ಟು ಸಂಯಮ ಹಾಗು ಮಿತಿ ಮೀರದಂತೆ ಮಾತಾಡುವ ಅವಶ್ಯಕತೆ ಯ ಬಗ್ಗೆ ನೀವು ಗಮನ ಹರಿಸಬೇಕು.
 3.  ಎಷ್ಟು ಸಮಯ ಮೀಸಲಿಡಬೇಕು ?: ಅವರು ಈ ವಿಷಯಗಳನ್ನು ತುಂಬಾ ತಲೆಗೆ ಹಾಕಿಕೊಳ್ಳದೆ ಸಾಮಾನ್ಯ ವಿಷಯ ಗಳಂತೆ ಇದನ್ನು ಕಡಿಮೆ ಸಮಯದಲ್ಲಿ ತಿಳಿಸಿದರೆ ಅವರಿಗೂ ಹೆಚ್ಚು ಅನವಶ್ಯಕ ಆಸಕ್ತಿ ಬೆಳೆಯದೆ ಇರಲು ಸಹಾಯವಾಗುತ್ತದೆ . ನಿಮ್ಮ ಸಂಭಾಷಣೆ ಹತ್ತರಿಂದ ಹದಿನೈದು ನಿಮಿಷ ಮೀರದಂತೆ ನೋಡಿಕೊಳ್ಳಿ .
 4. ಮಕ್ಕಳೊಂದಿಗೆ ಮಾಹಿತಿ ಹಂಚುವ ಪರಿ ಹೇಗಿರಬೇಕು ?: ಹಂತ ಹಂತ ವಾಗಿ ಅವರೊಂದಿಗೆ ನೇರವಾಗಿ ಋತುಚಕ್ರ ದ ಬಗ್ಗೆ ಅಲ್ಲದೆ ದೇಹದ ಇತರೆ ಭಾಗ ಗಳು ಹಾಗು ವಯಸ್ಸಾದಂತೆ ಅವುಗಳಲ್ಲಿ ಆಗುವ ಸಹಜ ಬದಲಾವಣೆಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸಬೇಕು .
  ಉದಾಹರಣೆ ಗೆ ಒಂದನೆ ವಾರ ದೇಹದಲ್ಲಿ ಜಠರ ದ ಪಾತ್ರವೇನು ? ಬೇರೆ ಬೇರೆ ಪ್ರಾಣಿಗಳಲ್ಲಿ ಅದರ ಆಕಾರ ಕೆಲಸ ವೇನು ?ಎರಡನೇ ವಾರ ನಮ್ಮ ದೇಹದಲ್ಲಿ ಕೂದಲು ಬೆಳೆಯುವ ವಿವಿಧ ಹಂತಗಳ ಬಗ್ಗೆ –
  ಮೂರನೇ ವಾರ ಹೆಣ್ಣಿನ ದೇಹಕ್ಕೂ / ಗಂಡಿನ ದೇಹಕ್ಕೂ ಇರುವ ಮುಖ್ಯ ವ್ಯತ್ಯಾಸಗಳು
  ಮಕ್ಕಳಿಗೆ ಎಷ್ಟು ಗೊತ್ತು ಎಂಬುದನ್ನು ತಿಳಿಯಲು ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಿ — ಈ ಮುಂಚೆ ಮಕ್ಕಳು – ನಾವು ಋತುಚಕ್ರದ ಬಗ್ಗೆ ಬಳಸುವ ಸಾಮಾನ್ಯ ಪದಗಳನ್ನು ಎಲ್ಲಿ, ಯಾವ ಸಮಯದಲ್ಲಿ ಯಾರಿಂದ ಕೇಳಿದ್ದಾರೆ ? ಅದರ ಬಗ್ಗೆ ತಿಳಿಯಲು ಅವರಿಗೆ ಆಸಕ್ತಿ ಇದೆಯಾ ? ಹೀಗೆ ಒಂದೊಂದೇ ಹಂತವಾಗಿ ಚರ್ಚಿಸಿದರೆ ಮಕ್ಕಳು ನಿಮ್ಮೊಂದಿಗೆ ಮಾತಾಡಲು ಹಿಂಜರಿಯುವುದಿಲ್ಲ. ಕೇವಲ ಮಾತಗಳಲ್ಲಿ ಅಲ್ಲದೆ ಅವರಿಗೆ ಚಿತ್ರಗಳ ಮೂಲಕ ತಿಳಿಸಿದರೆ ಹೆಚ್ಚು ಆಸಕ್ತಿಯಿಂದ ಕಲಿಯುತ್ತಾರೆ. ಇಲ್ಲಿ ಇಂಟರ್ನೆಟ್ ನ ಸದ್ಬಳಕೆ ಮಾಡಿಕೊಳ್ಳಬಹುದು ಮಕ್ಕಳಿಗೆಂದು ವಿವಿಧ ಚಿತ್ರ ಗಳನ್ನೂ ಸಂಗ್ರಹಿಸಿ ಅವರಿಗೆ ತೋರಿಸಬಹುದು.ಗಮನವಿರಲಿ ನಿಮ್ಮ ಮಾತು /ಭಾಷೆ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಇರಲಿ ಅನಾವಶ್ಯವಾದ , ಅತಿರೇಕ ವಾದ ಮಾತುಗಳಿಂದ ಮಕ್ಕಳ ಮಾನಸಿಕ ಅರೋಗ್ಯ ದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
 5. ತಜ್ಞ ರ ಸಲಹೆ ಪಡೆಯಿರಿ: ಒಂದೊಮ್ಮೆ ಈ ವಿಷಯದ ಬಗ್ಗೆ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ನಿಮಗೆ ತಿಳಿಸಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ತಿಳಿದವರ ಸಹಾಯ ಉದಾಹರಣೆಗೆ ಮಕ್ಕಳ ಮೆಚ್ಚಿನ ಶಿಕ್ಷಕರೋ , ನಿಮ್ಮ ಕುಟುಂಬ ವೈದ್ಯರೂ , ಅರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ನಿಮ್ಮ ಸ್ನೇಹಿತರೋ – ಯಾರು ನಿಮಗೆ ಉತ್ತಮ ಎನಿಸಿದರೆ ಅವರ ಸಹಾಯ ಕೇಳಿ ಪಡೆಯಿರಿ.

ಆಸಕ್ತ ಪೋಷಕರು ತಮ್ಮ ಮಕ್ಕಳಿಗೆ ಕಾಮಿಕ್ ಪುಸ್ತಕದ ಮೂಲಕವೂ ಋತುಚಕ್ರದ ಬಗ್ಗೆ ತಿಳಿಸಬಹುದು. ಈ ಲಿಂಕ್ ಅನ್ನು ಓದಿ – https://www.menstrupedia.com/comic/kannada ಈ ಸಂಸ್ಥೆ ಭಾರತದಲ್ಲಿ ಋತುಚಕ್ರದ ಬಗ್ಗೆ ಪುಸ್ತಕದ ಮೂಲಕ ತಿಳಿಸಿ ಇರುವ ಮೌಢ್ಯವನ್ನು ನೀಗಿಸಲು ಕೆಲಸ ಮಾಡ್ದುತ್ತಿದೆ .

ಹೆಣ್ಣು ಮಗುವಾಗಲಿ ಗಂಡು ಮಗುವಾಗಲಿ ಅವರ ದೇಹದ ಬದಲಾವಣೆಗಳ ಬಗ್ಗೆ ಅವರಿಗೆ ಸರಿಯಾದ ಸಮಯದಲ್ಲಿ ಆರೋಗ್ಯಕರ ವಾದ ವಾತಾವರಣ ದಲ್ಲಿ ಮಾಹಿತಿ ನೀಡಿದಲ್ಲಿ ಮುಂದೆ ಆಗಬಹುದಾದ ಅನೇಕ ದುಷ್ಪರಿಣಾಮಗಳನ್ನು ನಾವು ತಡೆಯಬಹುದು . ಈ ಮಾಹಿತಿಯ ಬಗ್ಗೆ ದಯವಿಟ್ಟು ನಿಮ್ಮ ಅನಿಸಿಕೆ ಯನ್ನು ತಿಳಿಸಿ.